Sunday, December 31, 2017

ಶಸ್ತ್ರಚಿಕಿತ್ಸೆ

Supra umbilical hernia-- ಮಗಳ ಉಬ್ಬಿದ ಹೊಕ್ಕಳಿಗೆ Dr. ರಮೇಶ್ ಸಂತಾನಕೃಷ್ಣನ್ ರವರು ನಮಗೆ ಹೇಳಿದ ವೈದ್ಯಕೀಯ ಹೆಸರು.  ಅನಿಕಾಳನ್ನು ಪರಿಶೀಲಿಸಿದ ಒಂದೇ ನಿಮಿಷದೊಳಗೆ ಇದು ಇಂತದ್ದೇ ಅಂತ ತೀರ್ಮಾನ ಮಾಡಿ ಅದಕ್ಕೆ ಶಸ್ತ್ರಚಿಕಿತ್ಸೆ ಮಾತ್ರ ದಾರಿ ಅಂತಾ ಹೇಳಿದ್ರು.  

ಅಂತರ್ಜಾಲದ ಮೂಲಕ ಅದರ ಬಗ್ಗೆ ಹೆಚ್ಚಾಗಿ ಮಾಹಿತಿ ಸಂಗ್ರಹಿಸಿದ ಮೇಲೆ ಡಾಕ್ಟರು ಹೇಳಿದ್ದನ್ನು ನಾವೂ ಒಪ್ಪಿಕೊಂಡು ಇವತ್ತೇ ಶಸ್ತ್ರಚಿಕಿತ್ಸೆ ಮಾಡಿಸುವುದು ಅಂತ ನಿರ್ಧಾರ ಮಾಡಿ ನಿನ್ನೆ ಅವಳನ್ನು ಅಡ್ಮಿಟ್ ಮಾಡಿದ್ದೂ ಆಯಿತು.  ಇವತ್ತು ಬೆಳಗ್ಗೆ ಯಾವಾಗಲಿನ ಹಾಗೆ ಎದ್ದ ಅವಳಿಗೆ ಆಪರೇಷನ್ ಥಿಯೇಟರ್ ಹೊರಗೆ ಇದ್ದ ಪುಗ್ಗೆ ಮತ್ತು ಗೊಂಬೆಗಳನ್ನು ನೋಡಿ ಖುಷಿಯೋ ಖುಷಿ.  

ಆ ಖುಷಿಯ ಮಧ್ಯೆ ದಾದಿಯರು ಅವಳನ್ನು ಥಿಯೇಟರ್ ಒಳಗೆ ಕರೆದುಕೊಂಡು ಹೋದದ್ದು ಅವಳಿಗೆ ಗೊತ್ತೇ ಆಗಲಿಲ್ಲ.  ಅವಳಿನ್ನು ಹೊರಗೆ ಬರಲಿಕ್ಕೆ ಕನಿಷ್ಟ ಪಕ್ಷ ಒಂದು ಗಂಟೆ ಆದರೂ ಆಗುತ್ತದೆ ಅಂತ ಗ್ರಹಿಸಿದ ನಾನು ತಕ್ಷಣ ತಿಂಡಿ ತಿಂದು ಬಂದೆ.  

ಇದರ ಮಧ್ಯದಲ್ಲಿ, ನಿನ್ನೆ ಅವಳನ್ನು ಹೊತ್ತುಕೊಂಡು ಇನ್ಶೂರೆನ್ಸ್ ಅಪ್ರೂವಲ್ ಗೆ ದಿನವಿಡೀ ಬಿಸಿಲಲ್ಲಿ ಓಡಾಡಿ ಅಚಲಾ ರಾತ್ರಿಯೇ ಜೋರು ತಲೆನೋವು ಬೇರೆ ಬರಿಸಿಕೊಂಡಿದ್ದಳು.  ಇನ್ನು ಬೆಳಿಗ್ಗೆ ತಿಂಡಿ ತಿನ್ನದೇ ಇದ್ದರೆ ಅವಳಿಗೆ ತಲೆನೋವು ತಡಿಲಿಕ್ಕೆ ಆಗುವುದಿಲ್ಲ ಅಂತ ಒತ್ತಾಯ ಮಾಡಿ ಕ್ಯಾಂಟೀನ್ ಗೆ ಕಳಿಸಿದೆ.  ಅವಳು ಅಲ್ಲೇ ಮೇಲಿನಿಂದ ನನ್ನನ್ನು ನೋಡಿದ್ದು ನನ್ನ ಆರನೇ ಇಂದ್ರಿಯಕ್ಕೆ ಹೇಗೋ ಗೊತ್ತಾಗಿದ್ದು ಇವೆಲ್ಲದರ ನಡುವೆ ನನಗೆ ಸೋಜಿಗದ ಸಂಗತಿ ಅಂತ ಕಂಡಿತು.  ಅವಳು ತಿಂಡಿ ಮುಗಿಸಿ ಬರಲಿ ಅಂತ ಕಾಯ್ತಾ ಅದೇನೋ ಯೋಚನೆ ಮಾಡ್ತಾ ಇರಬೇಕಾದರೆ "ಮಗುವಿನ ಅಮ್ಮ ಎಲ್ಲಿ?" ಅಂತ ಕೇಳಿದಾಗಲೇ ನಂಗೆ ಇಹಲೋಕದ ಜ್ಞಾನ ಬಂದದ್ದು.  

"ಮಗುವಿನ ಅಮ್ಮ ತಿಂಡಿ ತಿನ್ನಲಿಕ್ಕೆ ಕ್ಯಾಂಟೀನ್ ಹೋಗಿದ್ದಾರೆ" ಅಂತ ನಾನು ಹೇಳಿದಾಗ "ಹಾಗಾದರೆ ನೀವೇ ಬನ್ನಿ" ಅಂತ ನರ್ಸ್ ನನ್ನನ್ನೇ ಒಳಗೆ ಕರೆದುಕೊಂಡು ಹೋದಳು.  ಒಳಗೆ ಹೋಗುತ್ತಿದ್ದಂತೆ ಅಲ್ಲಿ ಇದ್ದ ಎಲ್ಲಾ ನರ್ಸ್ ಗಳು "ಅಮ್ಮ ಅಮ್ಮ" ಅಂತ ಕ್ಷೀಣ ಧ್ವನಿಯಲ್ಲಿ ಕೂಗುತ್ತಿದ್ದ ನನ್ನ ಮಗಳನ್ನು ಎತ್ತಿಕೊಂಡು ಸಮಾಧಾನ ಪಡಿಸಲು ಹರಸಾಹಸ ಪಡುತ್ತಾ ಇದ್ದರು.

ನನ್ನನ್ನು ನೋಡಿದ ತಕ್ಷಣ ಆ ಅರಿವಳಿಕೆ ಮಂಪರಿನ ಮಧ್ಯದಲ್ಲೂ ನನ್ನ ಗುರುತು ಹಿಡಿದು ಅವಳು ನನ್ನ ಕೈಗೆ ಬಂದಳು.  ಅರಿವಳಿಕೆಯ ಮಂಪರಿನಿಂದಲೋ ಅಥವಾ ಶಸ್ತ್ರಚಿಕಿತ್ಸೆಯ ನೋವಿಂದಲೋ ಅವಳ ತುಟಿಗಳು ನಡುಗುತ್ತಿದ್ದವು.  ನನ್ನ ಕೈಗೆ ಬಂದ ಮೇಲೆ ನಾನೆಷ್ಟೇ ಪ್ರಯತ್ನ ಪಟ್ಟರೂ ಅವಳು ಸಮಾಧಾನ ಆಗುವ ಲಕ್ಷಣ ಕಾಣ್ತಾ ಇರಲಿಲ್ಲ.  ಅಷ್ಟರಲ್ಲೇ ಅಚಲಾ ತಿಂಡಿ ಮುಗಿಸಿ ಓಡಿಕೊಂಡು ಒಳಗೆ ಬಂದಳು.  

ಅಮ್ಮನನ್ನು ನೋಡಿ ಸ್ವಲ್ಪ ಸಮಾಧಾನ ಮಾಡಿಕೊಂಡು ಅನಿಕಾ ಅಮ್ಮನ ಹೆಗಲ ಮೇಲೆ ಮಲಗಿಕೊಂಡು ಸ್ವಲ್ಪ ಪ್ರಯತ್ನದ ನಂತರ ಅಂತೂ ಇಂತೂ ನಿದ್ದೆಯ ಮಡಿಲಿಗೆ ಜಾರಿದಳು.  ಅಂತೂ ಇಂತೂ ಆಪರೇಷನ್ ಮುಗಿದಿತ್ತು.

No comments: